Harihar Sep. 9, 2012 : 'Harihara Mathe Vishsvasada-varadaathe'   a spiritual articles by Fr. Roman Pinto. Mother Mary has strong gift of faith because of her personal experience with God. The same faith remained until the foot of the Cross. Therefore She has been honored Gift of faith.  All those who experience lack of faith could receive Gift of the faith through her intersession.

Harihar Matha Gift of Faith :

 



 

ಹರಿಹರದ ಆರೋಗ್ಯ ಮಾತೆ - ವಿಶ್ವಾಸದ ವರದಾತೆ

"ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಎಂಬ ದೇವ ವಾಕ್ಯದ ಮೇಲೆ ಗುರುಗಳು ಪ್ರಬೋಧನೆ ನೀಡಿ ಊಟದ ಕೋಣೆಗೆ ತೆರಳಿದಾಗ ವಯಸ್ಸಾದ ಗುರುಗಳು ಪ್ರಬೋಧನೆ ನೀಡಿದ ಗುರುಗಳಿಗೆ ಹೇಳಿದರು: 'ಗುರುಗಳೇ, ನೀವು ಹೇಳಿರುವುದು ನಂಬಲು ನನಗೆ ಸ್ವಲ್ಪ ಕಷ್ಟವಾಗುತ್ತದೋ ಏನೋ'. ಅದಕ್ಕೆ ಪ್ರಬೋಧನೆ ನೀಡಿದ ಗುರುಗಳು: 'ಗುರುಗಳೇ, ದೇವರಿಗೆ ಅಸಾಧ್ಯವಾದದ್ದು ಯಾವುದು ಇಲ್ಲ ತಾನೇ'. ವಯಸ್ಸಾದ ಗುರುಗಳು 'ಇದೆ!!! ಮಾತೆ ಅವರಲ್ಲಿ ಏನೂ ಕೇಳಿದರೂ ಇಲ್ಲ ಎನ್ನಲು ಅವರಿಂದ ಆಗುವುದಿಲ್ಲ. ಅದೇ ಅವರಿಗೆ ಅಸಾಧ್ಯವಾದ ಕೆಲಸ” ಎಂದರು.

ಒಂದು ರೀತಿಯಲ್ಲಿ ಸತ್ಯ ವಿಶ್ವಾಸದ ರಕ್ಷಣೆಯ ಬದುಕಿನಲ್ಲಿ ಮಾತೆಯ ಸ್ಥಾನ ವಿಶೇಷವಾದದ್ದು ವಿಶ್ವಾಸದ ವರನಿಧಿ, ಗಣಿ, ಆಳಕ್ಕೆ ಇಳಿದಂತೆ ಅವರ ಸಂಬಂಧ ಗಟ್ಟಿಯಾಗುತ್ತದೆ. ಮಾತೆ ಮತ್ತು ಪ್ರಭು ಯೇಸುವಿನ ನಡುವಿನ ಅನ್ಯೋನ್ಯತೆಯ ಸಂಬಂಧ ಯಾರಿಂದಲೂ ಬೇರ್ಪಡಿಸಲು ಅಸಾಧ್ಯ. ತಾಯಿ ಇಲ್ಲದೇ ಮಗನಿಲ್ಲ ಮಗನಿಲ್ಲದೇ ತಾಯಿಗೆ ಗೌರವವಿಲ್ಲ. ಪಾಪದ ಬಂಧನದಲ್ಲಿ ಬಿದ್ದ ಮಾನವನಿಗೆ ಅಧ್ಯಾತ್ಮಿಕ ರೂಪ ನೀಡುವಲ್ಲಿ ಮಾತೆಯ ಪಾತ್ರ ಹಿರಿದು, ನಡೆದ ದಾರಿ ಸಂಕೀರ್ಣ, ತಾನು ಹಿಡಿದ ದಾರಿಯನ್ನು ಬಿಡದೆ ದೃಢನಿರ್ಧಾರ ತಳೆದು ನಂಬಿಕೆ, ಶೃದ್ಧೆ ಎಡರು ತೊಡರುಗಳಿಗೆ ಕುಗ್ಗದೆ, ಕುಸಿಯದೆ ಒಂದು ರೀತಿಯಲ್ಲಿ ಮುಳಿನ ಹಾದಿಯಲ್ಲಿ ತ್ಯಾಗದಿಂದ ನಡೆದು - ನಡೆಯಲು ಅಸಾಧ್ಯವಾದ ದಾರಿಯಲ್ಲಿ ನಡೆದು ನಮಗೆ ಮಾರ್ಗದರ್ಶಿಯಾದರು.
 
‘ಪರರೂ ಅಳಿದರೂ ಪರವಾಗಿಲ್ಲ ನೀ ಉಳಿ' ‘ತಲೆ ಒಡೆದರೂ ಒಡೆಯ' 'ಕನ್ನ ಹಾಕಿದವನಿಗೆ ಚಿನ'್ನ ‘ಲಂಚ ಪಡೆದವನ ಮನೆಯಲ್ಲಿ ಕಾಣಬಹುದು ಒಳ್ಳೆಯ ಮಂಚ' ಎಂಬ ಈ ಕಾಲದಲ್ಲಿ ಮಾತೆ ಮರಿಯಳ ಬದುಕು ನಿಜಕ್ಕೂ ಆದರ್ಶ ಅದನ್ನು ಸ್ವಲ್ಪ ಧ್ಯಾನಿಸಲು ಪ್ರಯತ್ನಿಸೋಣ.


ಮಾತೆ ವಿಶ್ವಾಸದ ವರದಾತೆ

ಧರ್ಮಸಭೆಯಲ್ಲಿ ಮಾತೆಯನ್ನು ನಾವು ಗೌರವದಿಂದ ಕಾಣುತ್ತೇವೆ. ಏಕೆಂದರೆ ಅವರ ವಿಶ್ವಾಸದ ಬದುಕು ನಮಗೆಲ್ಲರಿಗೂ ಒಂದು ಆದರ್ಶ. ಅವರ ಈ ಬದುಕು ಒಂದು ದಿನದಲ್ಲಿ ರೂಪುಗೊಂಡಿಲ್ಲ ನಿರಂತರವಾಗಿ ವಿಶ್ವಾಸದ ಪ್ರಕಟಣೆ ಅವರ ಬಾಳಿನಲ್ಲಿ ವ್ಯಕ್ತವಾಯಿತು. ಅವರ ವಿಶ್ವಾಸ ಈ ಕೆಳಗಿನ ಹಂತಗಳನ್ನು ದಾಟಿ ಬಲಿಷ್ಟವಾಯಿತು.

ಮಾತೆಯ ವಿಶ್ವಾಸ ವೈಯಕ್ತಿಕವಾಗಿ ರೂಪುಗೊಂಡ ವಿಶ್ವಾಸ

ದೇವರು ಮಾತೆಯನ್ನು ವೈಯಕ್ತಿಕವಾಗಿ ಸಂಪರ್ಕಿಸಿದರು. ಅದೇ ರೀತಿ ಸ್ವತಂತ್ರವಾಗಿ ದೇವರ ಕರೆಗೆ ಅವರು ಸ್ಪಂದಿಸಿದರು. ಕರೆ ದೇವರಿಂದ ಬಂದರೂ ಉತ್ತರವನ್ನು ಮಾತೆ ನೀಡಿದರು. ದೇವ ವಾಕ್ಯವನ್ನು ಆಲಿಸಿ ಅದಕ್ಕೆ ತಲೆಬಾಗಿ ವಿಧೇಯತೆಯಿಂದ ವೈಯಕ್ತಿಕವಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಮಾತೆಯ ವಿಶ್ವಾಸ ಸ್ವತಂತ್ರ ನಿರ್ಧಾರದ/ ನಿರ್ಭಂಧಗಳಿಲ್ಲದ ವಿಶ್ವಾಸ

ನಂಬಿಕೆ ವ್ಯಕ್ತಪಡಿಸಲು ಯಾರನ್ನೂ ಬಲವಂತ ಮಾಡಲು ಸಾಧ್ಯವಿಲ್ಲ. ಅದು ಸ್ವಯಂ ಪ್ರೇರಿತವಾಗಿ, ಸ್ವಂತ ನಿರ್ಧಾರದಿಂದ ಬರಬೇಕು. ಯೇಸು ಜನರು ಸ್ವತಂತ್ರರಾಗಿರುವುದನ್ನು ಕಾಣಬಯಸುತ್ತಾರೆ. ಗಬ್ರಿಯೇಲ್ ದೂತ ಮರಿಯಳ ಸ್ವತಃ ನಿರ್ಧಾರ ಆಲಿಸಲು ಬಂದಿದ್ದ ಬೆದರಿಕೆ ನೀಡಲು ಬಂದಿರಲಿಲ್ಲ. ಎಲ್ಲವನ್ನು ಅರಿತು ದೇವ ಚಿತ್ತಕ್ಕೆ ಸ್ವಯಂಪ್ರೇರಿತರಾಗಿ 'ತಥಾಸ್ತು' ಎಂದಾಗ ದೇವ ಮಂದಿರ, ಪವಿತ್ರ ಸಂಪುಟದ ಪೆಟ್ಟಿಗೆ ಅವರಾದರು.

ಮಾತೆಯ ವಿಶ್ವಾಸ ಪರಿಪೂರ್ಣ ವಿಶ್ವಾಸ

ದೇವರಲ್ಲಿ ಮಾತೆ ವಿಶ್ವಾಸ ವ್ಯಕ್ತಪಡಿಸಿದಾಗ ಅಲ್ಲಿ ಸಂಶಯವಿರಲಿಲ್ಲ. ಅಖಂಡ ನಂಬಿಕೆಯ ಅನಾವರಣ, ಪೂರ್ಣ ವಿಶ್ವಾಸ ಪ್ರಕಟಣೆ, ‘ಇಗೋ ಕರ್ತರ ಚರಣದಾಸಿ ನಿಮ್ಮ ಚಿತ್ತದಂತೆ ಆಗಲಿ'.

ಮಾತೆಯ ವಿಶ್ವಾಸ ಶಿಲುಬೆಯ ಬುಡದ ವಿಶ್ವಾಸ

ಮಾತೆಯ ಪಯಣ ಒಂದು ಶಿಲುಬೆಯ ಹಾದಿ. ಆಕೆ ಪಡೆದಿರುವುದು ಕಡಿಮೆ, ಲೌಕಿಕ ಜೀವನದಲ್ಲಿ ಕಳೆದುಕೊಂಡಿರುವುದು ಜಾಸ್ತಿ. ನಂಬಿಕೆ, ವಿಶ್ವಾಸವು ಎಲ್ಲವನ್ನು ತ್ಯಜಿಸಲು ಬಲನೀಡುತ್ತದೆ. ಒಣ ವಿಶ್ವಾಸ ಮಾತ್ರ ಪಡೆಯುವ ಕಡೆ ಗಮನ ನೀಡುತ್ತದೆ. ಗೋದಲಿಯಿಂದ ಗೊಲ್ಗೊಥದವರೆಗೆ ಮಾತೆ ನಡೆದ ಹಾದಿಯು ಶಿಲುಬೆಯ ಹಾದಿ, ಕಲ್ಲು ಮುಳ್ಳು ಕಷ್ಟ, ಚಿಂತೆಯ ನಡುವೆ ಮಾತೆಯ ವಿಶ್ವಾಸ ರೂಪುಗೊಂಡು ಅರಳಿತು.

ನೀಗಲು ಭಕ್ತಿಯ ಬರ ಮಾತೆ ನೀಡಿದಳು ತನ್ನ ದರ್ಶನದ ವರ

ಹೇಳ ಹೆಸರಿಲ್ಲದ ಊರು ಹರಿಹರವಾಗಿದ್ದರೂ ಮಾತೆಯ ಮಧ್ಯ ಪ್ರವೇಶದ ಮೂಲಕ ಇಂದು ವಿಶ್ವಾಸಬರಿತ ಸುಂದರ ಪರಿಸರ ಅಲ್ಲಿ ನಿರ್ಮಾಣವಾಗಿದೆ. ಮಾತೆಯ ಮೂಲಕ ಯೇಸುವಿನೆಡೆಗೆ ಸಾಗಲು ಹರಿಹರದ ಆರೋಗ್ಯ ಮಾತೆಯ ಮಡಿಲು ಪ್ರೀತಿಯ ಕಡಲು.
 
ಬಡ ಬ್ರಾಹ್ಮಣನನ್ನು ನೀರಿನಿಂದ ರಕ್ಷಿಸಿ ಆತನ ಕುಟುಂಬದಲ್ಲಿ ಕಳೆದುಹೋದ ಸಮಾಧಾನವನ್ನು ಮರಳಿ ನೀಡಿ ಲೋಕಕಲ್ಯಾಣಕ್ಕಾಗಿ ತಮ್ಮ ದರ್ಶನ ನೀಡಲು ಸದಾ ಸಿದ್ಧ ಅನ್ನುವುದನ್ನು ಹರಿಹರದಲ್ಲಿ ತನ್ನ ಅದ್ಭುತ ಸ್ವರೂಪದ ಮೂಲಕ ದರ್ಶನವಿತ್ತು.
 
ಹರಿಹರಕ್ಕೆ ವಿಶ್ವಾಸದ ಪರಿಸರ ಕರುಣಿಸುವಲ್ಲಿ ಮಾತೆ ದರ್ಶನ ನಿಜಕ್ಕೂ ವರದಾನ. ಹರಿಹರದ ಆರೋಗ್ಯಮಾತೆ ಭಕ್ತರ ಬಾಳಿನ ವರದಾತೆ. ವಿಶ್ವಾಸದಿಂದ ಮಾತೆಯ ಬಳಿಗೆ ಬರುವ ಪ್ರತಿಯೊಬ್ಬರಿಗೆ ಪ್ರಭುವಿನ ಆಶೀರ್ವಾದ ವರನಿಧಿ ಪಡೆಯುತ್ತಿರುವುದು, ಪ್ರತಿ ವರ್ಷ ಸೆಪ್ಟೆಂಬರ್ 8ನೇ ತಾರೀಖು ನಡೆಯುವ ಜಾತ್ರೆಗೆ ಬರುವ ಜನರ ಪ್ರವಾಹ ಜಗತ್ತಿಗೆ ವಿಶ್ವಾಸದ ಒಂದು ಪ್ರತೀಕ.  ಧರ್ಮಕ್ಷೇತ್ರದ ಅಧಿಕೃತ ಪುಣ್ಯಕ್ಷೇತ್ರ ಎಂಬ ಗರಿಯನ್ನು ತನ್ನ ಮುಡಿಗೇರಿಸಿ ಒಂದು ವರ್ಷ ಕಳೆದಿರುವಾಗ ನಿಜಕ್ಕೂ ಮಾತೆ ಎಲ್ಲರಿಗೂ ಆಶ್ರಯತಾಣವಾಗಿರುವುದು ಆಶ್ಚರ್ಯಕರವಲ್ಲ.

ಹರಿಹರವಾಯಿತು-ವಿಶ್ವಾಸದ ಪರಿಸರ

ತನ್ನ ಅರಿವು ಇಲ್ಲದ ವ್ಯಕ್ತಿಗೆ ಕಷ್ಟ ನೋವಿನಲ್ಲಿ ಸ್ವರೂಪದ ರೂಪದಲ್ಲಿ ದರ್ಶನ ನೀಡಿ ತನ್ನ ತಾಯಿ ಪ್ರೀತಿಯನ್ನು ತೋರಿ ಶತಮಾನಗಳೇ ಕಳೆದಿವೆ. ದೈವಭಕ್ತಿಯ ಬರಕ್ಕೆ ಒಳಗಾದ ಪರಿಸರ ಇಂದು ವಿಶ್ವಾಸ ಪರಿಸರವಾಗಿ ಭಕ್ತಿ ದಾಸೋಹ ಎಡೆಬಿಡದೆ ನಡೆಯುತ್ತಿದೆ. ನಿತ್ಯ ದಿವ್ಯಬಲಿಪೂಜೆಗಳು, ಧ್ಯಾನಕೂಟಗಳು, ಶನಿವಾರ ಸಂಜೆ ನವೇನ ಪೂಜೆ, ವಿಶೇಷ ಪ್ರಾರ್ಥನೆ, ಬಂದ ಭಕ್ತಾದಿಗಳಿಗೆ ವಿಶೇಷ ಪೂಜೆ, ಸಮಸ್ಯೆಗಳನ್ನು ಆಲಿಸಲು ಹಾಗೂ ಪ್ರಾರ್ಥಿಸಲು ಗುರುಗಳ ನಿರಂತರ ಲಭ್ಯತೆ, ಹಬ್ಬಕ್ಕೆ ನವದಿನಗಳ ಸಿದ್ಧತೆ, ಭಕ್ತಿಯ ಹಬ್ಬದ ಆಚರಣೆ ಎಲ್ಲರಿಗೂ ಅನುವಾಗುವಂತೆ ಕನ್ನಡ, ತಮಿಳು, ತೆಲುಗು, ಮಳಯಾಳಂ, ಕೊಂಕಣಿ ಭಾಷೆಗಳಲ್ಲಿ ವಿಶೇಷ ಹಬ್ಬದ ಪೂಜೆಗಳು, ಪಾಪ ನಿವೇದನೆಯ ಸಂಸ್ಕಾರ, ಪರಮ ಪ್ರಸಾದ ಆರಾಧನೆ ಲಭ್ಯವಿದೆ.
 
ತಾಯಿ ಬಳಿಗೆ ಒಮ್ಮೆ ಬಂದವರನ್ನು ಮತ್ತೆ ಆ ತಾಯಿ ತನ್ನತ್ತ ಸೆಳೆಯುವುದು ಈ ಪರಿಸರದ ವಿಶೇಷ. ಕಷ್ಟ ತೊಂದರೆಯಿಂದ ನೊಂದು ಹೋಗಿರುವೆಯಾ? ಮಕ್ಕಳ ವರದಾನಕ್ಕಾಗಿ ಪ್ರಾರ್ಥಿಸುತ್ತಿರುವೆಯಾ? ಗುಣವಾಗದ ಖಾಯಿಲೆ ನಿನಗೆ ಮುತ್ತಿಕೊಂಡಿವೆಯಾ? ಮನಶಾಂತಿ ಕಳೆದುಕೊಂಡಿರುವೆಯಾ? ಬಾ....ಹರಿಹರದ ಆರೋಗ್ಯಮಾತೆಯ ಸನ್ನಿಧಾನಕ್ಕೆ. ಕರಗಳ ತೆರೆದು ಸ್ವಾಗತಿಸುವ ತಾಯಿ ನಿನ್ನನ್ನು ಪ್ರೀತಿಸುತ್ತಾಳೆ.


- ವಂ. ರೋಮನ್ ಪಿಂಟೊ.
  ಹರಪನಹಳ್ಳಿ

Home | News | Sitemap | Contact Us

Copyright © 2016 - www.hariharshrine.org .
Powered by eCreators

 

Phone: 08192 - 242269
    E-mail: [email protected]
[email protected]

Fr. George K.A. : +91-99454 46312

Contact Us

Shrine of Our Lady of Health
P.B.No: 19, Church Road
Harihar - 577 601
Davanagere District
Karnataka